ಎಲ್ಲಾ ವಾಹಿನಿಗಳು ಪ್ರಸಾರ ಮಾಡುವ ಮುಖ್ಯ ವಿಷ್ಯ "IT ಕ್ಷೇತ್ರ". ಇಲ್ಲಿ ಯಾರು ಕನ್ನಡಕ್ಕೆ ಪ್ರಾಮುಖ್ಯತೆ ಕೊಡ್ತಾ ಇಲ್ಲ ಅನ್ನೋದು. ನಾನು ಒಬ್ಬ ಸಾಫ್ಟ್‌ವೇರ್ ಇಂಜಿನಿಯರ್ ಆಗಿ, ನನ್ನ ಸುತ್ತ ನಡೆಯುವ ಬಹಳಷ್ಟು ಆಗು-ಹೋಗುಗಳನ್ನು ನೋಡಿರುವ ನಾನು ಇದು ಎಲ್ಲ ಕಡೆ ಹಾಗೂ ಎಲ್ಲ ಕಂಪನಿಗಳಿಗೆ ಅನ್ವಯಿಸುವುದಲ್ಲ ಎಂಬುದನ್ನು ಹೇಳಬಲ್ಲೆ. ನಮ್ಮ ಕಂಪನಿಯಲ್ಲಿ ಪ್ರತಿ ವರ್ಷ ರಾಜ್ಯೋತ್ಸವವನ್ನು ಆಚರಿಸಲಾಗುತ್ತದೆ. ಕನ್ನಡೇತರ ನೌಕರರಾಗಿದ್ದು ಕನ್ನಡ ಮಾತನಾಡಲು ಕಲಿತಿರುವವರಿಗೆ ಪ್ರಶಸ್ತಿ ಕೊಡುವ ಅಭ್ಯಾಸವನ್ನು ಉಳಿಸಿಕೊಂಡಿದೆ.
ಇದರ ಮಧ್ಯದಲ್ಲಿ ಕನ್ನಡ ಕಲಿಯದೆನೇ ಜೀವನ ಬೆಂಗಳೂರಿನಲ್ಲಿ ಸಾಧ್ಯವಿರುವಾಗ ಏಕೆ ಕಲಿಯಬೇಕು ಅನ್ನುವವರೂ ಇದಾರೆ. ಅದೇನೇ ಇರಲಿ ಪ್ರತಿ ವರ್ಷ ರಾಜ್ಯೋತ್ಸವದ ದಿನದಂದು ಮಾತ್ರ ಕನ್ನಡ ಎಂದು ಎಲ್ಲೆಡೆ ಹಾರಾಡುವ ಜನ ಬೇರೆ ದಿನ ಅದರ ಬಗ್ಗೆ ಗಮನ ಕೊಡುವುದಿಲ್ಲ. ಇಷ್ಟೆಲ್ಲಾ ಮಾತನಾಡುವ ಟಿವಿ ವಾಹಿನಿಗಳು ಅಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ರಾಜಕಾರಣಿಗಳು ನಾವು ಹೀಗೆ ಮಾಡಬೇಕು ಹಾಗೆ ಮಾಡಬೇಕು ಎಂದು ಮಾತನಾಡುತ್ತಾ ಪ್ರತಿಯೊಂದಕ್ಕೂ ಸರ್ಕಾರವನ್ನು ದೂಷಿಸುವುದು ಎಷ್ಟು ಸರಿ? ಸರ್ಕಾರ ಜನರ ಮನವೊಲಿಸಲು ಸಾಧ್ಯವೇ? ಪ್ರತಿಯೊಬ್ಬರಿಗೂ ತಮ್ಮ ಭಾಷೆಯ ಬಗ್ಗೆ ಅಭಿಮಾನ ಎಲ್ಲಿಯವರೆಗೆ ಇರುವುದಿಲ್ಲವೋ ಅಲ್ಲೀವರೆಗೂ ಏನೂ ಸಾಧ್ಯವಿಲ್ಲ.
ಮತ್ತೊಂದೆಡೆ ಸರ್ಕಾರದ ಜವಾಬ್ಧಾರಿ ಏನು ಅಂತ ಯೋಚಿಸೋಣ? ಆಂಗ್ಲ ಭಾಷೆ ಕಲಿಯದೇ ಕನ್ನಡವನ್ನೇ ಕಲಿಯಬೇಕು ಅಂತ ಕಡ್ಡಾಯ ಗೊಳಿಸಿದರೆ ಜಾಗತೀಕರಣವಾಗುತಿರುವ ಯುಗದಲ್ಲಿ ಎಲ್ಲವೂ ಕಷ್ಟ. ಆದರೆ ಕನ್ನಡವನ್ನು ಕಡ್ಡಾಯ ಕಲಿಕೆಯ ಭಾಷೆಯನ್ನಾಗಿಸಿದೆ. ವೃತ್ತಿಪರ ಕೋರ್ಸ್‌ಗಳಲ್ಲೂ ಸಹ ಇದನ್ನು ಅಳವಡಿಸಲಾಗಿದೆ. ನೆರೆ ರಾಜ್ಯ ಮಹಾರಾಷ್ಟ್ರದಲ್ಲಿ ಮರಾಟಿಗರಿಗೆ ಮೊದಲ ಆದ್ಯತೆ ಇರುವಂತೆ ಇಲ್ಲಿ ಯಾವ ಮೀಸಲಾತಿಯನ್ನು ತಂದಿಲ್ಲ. ಬದಲಾಗಿ ಎಲ್ಲ ಭಾಷೆ, ಸಂಸ್ಕೃತಿಯ ಜನರಿಗೆ ಮೆರಿಟ್ ಆಧಾರದ ಮೇಲೆ ಕೆಲಸ ಕೊಡುವ ಅವಕಾಶ ಇಲ್ಲಿದೆ. ಇದು ಎಷ್ಟರ ಮಟ್ಟಿಗೆ ಸರಿ ಎಂದು ಗೊತಿಲ್ಲ. ಇದಕೆ ಪರ ವಿರೋಧ ಎರಡೂ ಮಾತನಾಡುವವರಿದ್ದಾರೆ. ಭಾಷಾಭಿಮಾನ ಎಲ್ಲರಲ್ಲೂ ಮೂಡಿದಾಗ ಮಾತ್ರವೇ ಇದಕೆಲ್ಲಾ ಅರ್ಥ. ಅದು ಬಿಟ್ಟು ಇನ್ಫೋಸಿಸ್ ನಾರಾಯಣ ಮೂರ್ತಿಯವರು ಕನ್ನಡಿಗರಿಗೆ ಕೆಲಸ ಕೊಡುತ್ತಿಲ್ಲ. ಆದ್ಯತೆ ಇವರಿಗೆ ಕೊಡಬೇಕು ಎಂದು ಪ್ರತಿ ವಾದ ವಿವಾದದಲ್ಲೂ ಇವರ ಹೆಸರನ್ನು ಮಧ್ಯ ತರುವುದು ಎಷ್ಟು ಸರಿ?
ಪರ ದೇಶಕ್ಕೆ ಹೋದಾಗ ಅಲ್ಲಿನ ಭಾಷೆಯನ್ನು ಕಲಿಯದೇ ಬದುಕು ಸಾದ್ಯವಿಲ್ಲ ಎಂದು ಅಲ್ಪ ಸ್ವಲ್ಪ ಕಲಿತು ಜೀವನ ನಡೆಸುವ ಜನ, ಬೆಂಗಳೂರಿಗೆ ಬಂದಾಗ ಕನ್ನಡ ಕಲಿಯುವುದು ಒಂದು ಅವಮಾನದ ಸಂಗಂತಿಯಂತೆ ಭಾವಿಸುವುದನ್ನು ನೋಡಿದ್ದೇನೆ. ಈ ನಿಟ್ಟಿನಲ್ಲಿ ಮೊದಲ ಹೆಜ್ಜೆ ಕನ್ನಡಿಗರದ್ದಾಗಿರಬೇಕು.
"ಸಿರಿಗನ್ನಡಂ ಗೆಲ್ಗೆ"
